ಗೆಟಿಸ್‍ಬರ್ಗ್ ಕದನ

	ಅಮೆರಿಕನ್ ಅಂತರ್ಯುದ್ಧದಲ್ಲಿ ನಿರ್ಧಾರಕ ಘಟ್ಟವೆಂದು ಪರಿಗಣಿತವಾಗಿರುವ ಒಂದು ಕದನ. ಅಮೆರಿಕ ಸಂಯುಕ್ತ ಸಂಸ್ಥಾನದ ದಕ್ಷಿಣ ಪೆನ್ಸಿಲ್ವೇನಿಯದಲ್ಲಿರುವ ಗೆಟಿಸ್‍ಬರ್ಗಿನಲ್ಲಿ, ಉತ್ತರದ ರಾಜ್ಯಗಳಿಗೂ (ಒಕ್ಕೂಟ) ಪ್ರತ್ಯೇಕಗೊಂಡಿದ್ದ ದಕ್ಷಿಣದ ರಾಜ್ಯಗಳಿಗೂ(ಪ್ರಸಂಧಿ) ನಡುವೆ 1863ರ ಜುಲೈ 1-3 ರಂದು ನಡೆಯಿತು. ಆ ವರ್ಷದ ಮೇ ತಿಂಗಳಲ್ಲಿ ಚಾನ್ಸೆಲರ್ಸ್‍ವಿಲ್‍ನಲ್ಲಿ ಒಕ್ಕೂಟ ಪಡೆಗಳಿಗೂ ಪ್ರಸಂಧಿ ಪಡೆಗಳಿಗೂ ಕದನ ಸಡೆದ ಮೇಲೆ ಸುಮಾರು ಎರಡು ತಿಂಗಳುಗಳ ಕಾಲ ವರ್ಜಿನಿಯದಲ್ಲಿ ಅನುಕೂಲಸ್ಥಾನಕ್ಕಾಗಿ ಯೋಜನೆ ಮಾಡುತ್ತಿದ್ದುವು. ಪ್ರಸಂಧಿ ಸೇನೆಯ ಅಧಿಪತಿ ಜನರಲ್ ಲೀ ಉತ್ತರಕ್ಕೆ ನುಗ್ಗುವ ಸಲುವಾಗಿ ತನ್ನ ಸೈನ್ಯವನ್ನು ಸಾಂದ್ರೀಕರಿಸುತ್ತಿದ್ದ. ಲಾಂಗ್‍ಸ್ಟ್ರೀಟ್, ಎವೆಲ್ ಮತ್ತು ಹಿಲ್‍ಗಳ ನಾಯಕತ್ವದಲ್ಲಿದ್ದ ಪಡೆಗಳನ್ನು ಜೂನ್ ತಿಂಗಳಲ್ಲಿ ಮುನ್ನುಗ್ಗಿಸಿದ. ಒಕ್ಕೂಟ ಪಡೆಗಳ ಅಧಿಪತಿ ಜೋಸೆಫ್ ಹೂಕರ್ ಇವರನ್ನು ಅನುಸರಿಸಿ ಸಾಗಿದ. ಲೀಯ ಸೈನ್ಯಕ್ಕೂ ವಾಷಿಂಗ್ಟನ್ನಿಗೂ ನಡುವೆಯೇ ತನ್ನ ಸೈನ್ಯ ಇರುವಂತೆ ಎಚ್ಚರ ವಹಿಸಿದ. ಜೂನ್ 27ರಂದು ಅಧ್ಯಕ್ಷ ಲಿಂಕನ್ ಹೂಕರನನ್ನು ತೆಗೆದು ಅವನ ಸ್ಥಾನದಲ್ಲಿ ಜಾರ್ಜ್ ಜಿ. ಮೀಡನನ್ನು ಅಧಿಪತಿಯಾಗಿ ನೇಮಿಸಿದ. ಲೀಯ ಕಡೆಯ ಅಶ್ವ ಪಡೆ ಬೇರೆ ಆಕ್ರಮಣಕಾರ್ಯವೊಂದರಲ್ಲಿ ಭಾಗವಹಿಸಿದ್ದರಿಂದ ಸಮಯಕ್ಕೆ ಸರಿಯಾಗಿ ಬರಲಿಲ್ಲ.ಆದ್ದರಿಂದ ತನ್ನ ಶತ್ರುಗಳ ಸ್ಥಾನವನ್ನು ಲೀ ಅರಿಯಲಾಗಲಿಲ್ಲ. ಅವನ ಪಡೆಗಳು ಗೆಟಿಸ್‍ಬರ್ಗ್ ಬಳಿಗೆ ಧಾವಿಸಿದುವು. ಪ್ರಸಂಧಿ ಪಡೆಗಳೂ ಒಕ್ಕೂಟ ಪಡೆಗಳೂ ಗೆಟಿಸ್‍ಬರ್ಗಿನ ಹೊರಗೆ ಜುಲೈ 1ರಂದು ಪರಸ್ಪರ ಎದುರಾಗಿ ಘರ್ಷಿಸಿದುವು. ಅಧಿಕ ಸಂಖ್ಯೆಯಲ್ಲಿದ್ದ ಲೀ ಪಡೆಯನ್ನು ತಡೆಗಟ್ಟುವ ಯತ್ನದಲ್ಲಿ ಒಕ್ಕೂಟ ಪಡೆಯ ನಾಯಕ ಜನರಲ್ ರೇನಾಲ್ಡ್ಸ್ ಸಾವಿಗೆ ಈಡಾದ. ಮೀಡನ ಸೈನ್ಯದ ಮುಖ್ಯ ಭಾಗ ರಾತ್ರಿಯಲ್ಲಿ ಆ ಎಡೆಗೆ ಬಂದು. ಗೆಟಿಸ್‍ಬರ್ಗಿಗೆ ದಕ್ಷಿಣದಲ್ಲಿದ್ದ ಸಿಮೆಟರಿ ರಿಜ್ ಮೇಲೆ ನೆಲೆಗೊಂಡಿತು. ಲೀಯ ಪಡೆ ಪಶ್ಚಿಮದ ಸೆಮಿನರಿ ರಿಜ್ ಮೇಲೆ ನಿಂತಿತು. ಜುಲೈ 2 ರಂದು ಮಧ್ಯಾಹ್ನ ಮತ್ತೆ ಕದನ ಆರಂಭವಾಯಿತು. ಲೀಯ ಪಡೆಗಳು ಒಕ್ಕೂಟ ಪಡೆಗಳನ್ನು ರೌಂಡ್ ಟಾಪ್ ಮತ್ತು ಲಿಟ್ಲ್‍ರೌಂಡ್ ಟಾಪ್ ಎಂಬ ಎರಡು ಗುಡ್ಡಗಳ ಮೇಲಿಂದ ಕದಲಿಸಲು ಯತ್ನಿಸಿದುವು: ಒಕ್ಕೂಟ ಪಡೆಗಳಿಂದ ಕಲ್ಪ್ಸ್ ಹಿಲ್ ಎಂಬ ಗುಡ್ಡವನ್ನು ಹಿಡಿದು ಕೊಂಡುವು, ಆದರೆ ಮರುದಿನ ವಿಜಯ ಬದಲಾಯಿತು. ಒಕ್ಕೂಟ ಪಡೆಗಳು ಕಲ್ಪ್ಸ್ ಹಿಲ್ಲನ್ನು ಮತ್ತೆ ತೆಗೆದುಕೊಂಡುವು. ಅಂದು ಮಧ್ಯಾಹ್ನ ಲೀಯ ಸೇನೆ ಒಕ್ಕೂಟ ಸೇನೆಗೆ ಫಿರಂಗಿ ಬಾರಿಸತೊಡಗಿತು. ಒಕ್ಕೂಟ ಸೇನೆ ಪ್ರತಿಯಾಗಿ ಬಾರಿಸಿತು. ಲೀಯ ಮದ್ದುದಾಸ್ತಾನು ಮುಗಿದುಹೋದ್ದರಿಂದ ಅಶ್ವಪಡೆ ಮುನ್ನುಗ್ಗಲು ಆಜ್ಞಾಪಿಸಬೇಕಾಯಿತು. ಜನರಲ್ ಪಿಕೆಟ್ ತನ್ನ 15,000 ಯೋಧರೊಂದಿಗೆ ಫಿರಂಗಿಯ ಮಳೆಯ ನಡುವೆ ನುಗ್ಗಿದ. ಆದರೆ ಅವನಿಗೆ ಸಾಕಷ್ಟು ಬೆಂಬಲ ಇಲ್ಲದ್ದರಿಂದ ಹಿನ್ನಡೆಯಬೇಕಾಯಿತು. ಪ್ರಸಂಧಿ ಸೇನೆ ಜರ್ಝರಿತವಾಗಿ ಹಿಂದಕ್ಕೆ ಸರಿದು, ಮತ್ತೆ ಮುನ್ನಗ್ಗಲು ಸಮಯ ಕಾಯುತ್ತಿತ್ತು. ಆದರೆ ಅದು ಸಾಧ್ಯವಾಗಲೇ ಇಲ್ಲ. ಮರುದಿನ ಎರಡೂ ಕಡೆಯ ಸೈನ್ಯಗಳು ಇದಿರುಬದಿರಾಗಿ ನಿಂತೇ ಇದ್ದುವು. ಕದನ ಮುಂದುವರಿಯಲಿಲ್ಲ. ಜುಲೈ 5 ರಂದು ಲೀ ಸೈನ್ಯ ಹಿಂದಕ್ಕೆ ಪೊಟೊಮ್ಯಾಕ್ ಕಡೆಗೆ ಸರಿಯಲಾರಂಭಿಸಿತು. ಜುಲೈ 13 ರಂದು ಅದನ್ನು ದಾಟಿ ಹೋಯಿತು. ಲೀಯ ಸೈನ್ಯದ ದುರ್ಬಲಸ್ಥಿತಿಯ ಉಪಯೋಗ ಪಡೆದುಕೊಂಡು ಅದರ ಮೇಲೆ ಮೀಡ್‍ನ ಪಡೆಗಳೇ ಆಕ್ರಮಣ ನಡೆಸಬೇಕಾಗಿತ್ತೆಂದೂ ಅವನು ಹಾಗೆಮಾಡದೆ ಹೋದದ್ದು ತಪ್ಪೆಂದೂ ಮೀಡ್ ಟೀಕೆಗೆ ಒಳಗಾದ. ಗೆಟಿಸ್‍ಬರ್ಗಿನ ಮೂರು ದಿನಗಳ ಕದನದಲ್ಲಿ ಪ್ರಸಂಧಿ ಪಕ್ಷದ ಕಡೆ 28,000 ಸೈನಿಕರೂ ಒಕ್ಕೂಟ ಪಕ್ಷದ ಕಡೆ 23,000 ಸೈನಿಕರೂ ಸತ್ತರು. ಪ್ರಸಂಧಿ ಪಕ್ಷದವರಿಗೆ ಗೆಟಿಸ್‍ಬರ್ಗ್‍ನ ಕದನದಲ್ಲಿ ಸೋಲಾದ ದಿನವೇ ಅವರಿಗೆ ಮಿಸಿಸಿಪಿ ನದಿಯ ದಂಡೆಯ ಮೇಲೆ ವಿಕ್ಸ್‍ಬರ್ಗ್‍ನಲ್ಲಿ ನಡೆದ ಕದನದಲ್ಲೂ ಸೋಲುಂಟಾಯಿತು. ಪ್ರಸಂಧಿಯ ಅಂತ್ಯ ಆಗ ಆರಂಭವಾಯಿತನ್ನಬಹುದು.
(ಆರ್.ಜಿ.ಎಸ್.)

ಆ ಕದನದಲ್ಲಿ ಸತ್ತ ಸೈನಿಕರ ರಾಷ್ಟ್ರೀಯ ಸ್ಮಾರಕವಾಗಿ ಗೆಟಿಸ್‍ಬರ್ಗ್ ರಣ ರಂಗವನ್ನು ರಾಷ್ಟ್ರಕ್ಕೆ ಅರ್ಪಿಸುವ ಸಮಾರಂಭದಲ್ಲಿ (1863 ನವೆಂಬರ್ 19) ಭಾಗವಹಿಸಿದ ಏಬ್ರಹಾ ಲಿಂಕನ್ ಮಾಡಿದ ಪುಟ್ಟ ಭಾಷಣ ಅತ್ಯುತ್ತಮ ಸಾಹಿತ್ಯ ವೆಂದೂ ಪ್ರಜಾಪ್ರಭುತ್ವದ ಶ್ರೇಷ್ಠತೆಯ ಅತ್ಯಂತ ಸಮರ್ಥ ಪ್ರತಿಪಾದನೆಯೆಂದೂ ಪ್ರಸಿದ್ಧವಾಗಿದೆ. ಅಮೆರಿಕದ ಪ್ರಖ್ಯಾತ ವಾಗ್ಮಿಯಾಗಿದ್ದ ಎಡ್ವರ್ಡ್ ಎವರೆಟ್ಟನ ಎರಡು ಗಂಟೆಗಳ ಭಾಷಣದ ಅನಂತರ ಮಾಡಿದ ಆ ಭಾಷಣ ಆಗ ಶ್ರೋತೃಗಳ ಗಮನ ಸೆಳೆಯಲಿಲ್ಲ. ಲಿಂಕನನಿಗೂ ಸಮಾಧಾನವೆನಿಸಿರಲಿಲ್ಲ. ಆದರೆ ಅಚ್ಚಾದಾಗ ಅದರ ಪ್ರಭಾವ ಎಷ್ಟೆಂಬುದು ಎಲ್ಲರಿಗೂ ಗೊತ್ತಾಯಿತು. ಎವರೆಟ್ಟನೂ ಅದನ್ನು ಹೊಗಳಿದ. ಲಿಂಕನ್ ಭಾಷಣಮಾಡಿದ ಸ್ಥಳದಲ್ಲಿ ಸ್ಮಾರಕವೊಂದಿದೆ.

ಗೆಟಿಸ್‍ಬರ್ಗ್ ಪಟ್ಟಣದ ಜನಸಂಖ್ಯೆ 7960 (1960).					*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ